ರೈದಾಸ
ಸು. 1482-1527. ಮಧ್ಯಯುಗೀನ ಸಂತ. ಸಂತ ರಮಾನಂದರ ಶಿಷ್ಯ. ಕಾಶಿಯ ಸಮೀಪದ ಮಡುಹಾಡೀಹ ಎಂಬ ಹಳ್ಳಿ ಇವನ ಜನ್ಮಸ್ಥಳವೆಂದು ತಿಳಿದುಬರುತ್ತದೆ. ಇವನ ತಂದೆ ರಗ್ದೂದಾದಾ (ಮಾನಸದಾಸ), ತಾಯಿ ಘರಬನಿಯಾ (ಕರ್ಮದೇವಿ), ಹೆಂಡತಿ ಲೇನಾ ಹಾಗೂ ಮಗ ವಿಜಯದಾಸ. ಸಂತ ರಮಾನಂದರ ಆಶೀರ್ವಾದದಿಂದ ರವಿವಾರ ಜನಿಸಿದ್ದರಿಂದ ಇವನಿಗೆ ರವಿದಾಸ ಎಂಬ ಹೆಸರಿತ್ತು. ರವಿದಾಸ ಎಂಬ ಹೆಸರು ಜನರ ಆಡುನುಡಿಯಲ್ಲಿ ರೈದಾಸ ಎಂದಾಯಿತು. ಈತ ರಮಾನಂದರ ಪ್ರಮುಖ ಶಿಷ್ಯನಾಗಿದ್ದ. ವೃತ್ತಿಯಲ್ಲಿ ಚಮ್ಮಾರನಾಗಿದ್ದ ಇವನು ಚರ್ಮದ ಕೆಲಸ ಮಾಡುತ್ತಲೇ ಜ್ಞಾನ-ಭಕ್ತಿಯ ಸ್ಥಾನವನ್ನು ತನ್ನದಾಗಿಸಿಕೊಂಡ. ಸಮಾನತೆ ಮತ್ತು ಸದಾಚಾರಕ್ಕೆ ಹೆಚ್ಚಿನ ಮಹತ್ತ್ವ ನೀಡಿದ್ದ. ಗೃಹಸ್ಥಾಶ್ರಮವನ್ನು ಸ್ವೀಕರಿಸಿದ್ದರೂ ಅನುರಕ್ತಿಯಲ್ಲಿ ವಿರಕ್ತಿಯನ್ನು ಎತ್ತಿಹಿಡಿದು ಸಮಾಜದಲ್ಲಿ ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟ.

ಈತನ ಕೆಲವು ಪದಗಳು (ಭಜನೆಗಳು) ಗುರುಗ್ರಂಥಸಾಹೇಬದಲ್ಲಿ ಸಂಗ್ರಹಿತವಾಗಿವೆ. ಇವನ ರಚನೆಗಳಲ್ಲಿ ಸಂತಕಾವ್ಯದ ಎಲ್ಲ ಪ್ರವೃತ್ತಿಗಳ ವಿಕಾಸವನ್ನು ನಾವು ನೋಡಬಹುದು. ತನ್ನ ಭಾವನೆ ಮತ್ತು ಅನುಭೂತಿಗಳನ್ನು ಈತ ತುಂಬ ಸರಳವಾಗಿ ಅಭಿವ್ಯಕ್ತಿಸಿದ್ದಾನೆ. ನಿರಾಡಂಬರ ಸಹಜ ಶೈಲಿ, ಹಾರ್ದಿಕ ಭಾವಗಳಿಂದ ಇವನ ರಚನೆಗಳು ಸಮೃದ್ಧವಾಗಿವೆ. ಅನೇಕ ಭಕ್ತರು ಇವನ ಹೆಸರನ್ನು ಆದರಪೂರ್ವಕವಾಗಿ ನೆನೆದಿದ್ದಾರೆ. ಈತ ಹೋದಲ್ಲೆಲ್ಲ ಜನರಲ್ಲಿ ತನ್ನ ಭಜನೆಗಳ ಮೂಲಕ ಹೃದಯ ವೈಶಾಲ್ಯ, ದೀನಾನುಕಂಪ ಮತ್ತು ಗಾಢವಾದ ಭಗವಂತನ ಪ್ರೇಮವನ್ನು ಬಿತ್ತರಿಸಿದ. ಸ್ವಾನುಭೂತಿಯ ಮಹತ್ವ, ಭ್ರಾಂತಿ ಮತ್ತು ಪರತತ್ವ, ಜ್ಞಾನ ಭೇದ, ಆರ್ತಗತಿ, ಅನಂತಭಕ್ತಿ, ಬಾಹ್ಯಪೂಜೆ, ಧ್ಯಾನದ ಸಾಧನೆ, ಆತ್ಮನಿವೇದನೆ, ವೇದನೆಯ ರಹಸ್ಯ, ವಿನಯ, ನಶ್ವರತೆ ಮತ್ತು ನಾಮಸಂಕೀರ್ತನೆ ಮೊದಲಾದ ವಿಷಯಗಳನ್ನು ಈತ ಮಹತ್ವಪೂರ್ಣವಾಗಿ ಹೇಳಿದ್ದಾನೆ.

ಪರಮಾತ್ಮ, ನಿರ್ಗುಣ, ನಿರಾಕಾರ, ನಿರಂಜನ ಮತ್ತು ತ್ರಿಗುಣಾತೀತ ಎನಿಸಿದ್ದಾನೆ. ಸತ್ಯ ಮತ್ತು ರಾಮ ಒಂದೇ ಆಗಿದ್ದು ಅವು ಅನಿರ್ವಚನೀಯ ಹಾಗೂ ಅಕ್ಷರ. ಚಿತ್ತಶುದ್ಧಿಯಿಂದ ಕೂಡಿದ ಧ್ಯಾನ, ಏಕಾಂತ ನಿಷ್ಠೆ ಮತ್ತು ಅಹಂನ ಪೂರ್ಣತ್ಯಾಗದಿಂದ ಆ ವಸ್ತುಗಳನ್ನು (ರಾಮ ಮತ್ತು ಸತ್ಯ) ಪಡೆಯಬಹುದು ಎಂಬ ತತ್ತ್ವ ಚಿಂತನೆ ಈತನ ಕೀರ್ತನೆಗಳಲ್ಲಿ ಕಂಡುಬರುತ್ತದೆ. ಮುಗ್ಧತೆ, ಶಾಂತಸ್ವಭಾವ, ಕಾತರ, ಕಳಕಳಿ, ದೈನ್ಯ-ಇವುಗಳ ಸಹಜ ಅಭಿವ್ಯಕ್ತಿ ಈತನ ಕೀರ್ತನೆಗಳಲ್ಲಿದೆ. ಒಂದು ಕೀರ್ತನೆ:
ಪ್ರಭುವೆ ನೀನು ಚಂದನ ನಾನು ನೀರು, ಅಂಗ ಅಂಗದಲಿಹುದು ವಾಸನೆ
ಪ್ರಭುವೆ ನೀನು ದೀಪ ನಾನು ಬತ್ತಿ, ಉರಿಯುತಿಹುದು ನಿಶಿದಿನವೆನೆ
ಪ್ರಭುವೆ ನೀನು ಮೋಡ ನಾನು ನವಿಲು, ದೃಷ್ಟಿ ಚಂದ್ರ ಚಕೋರದಂತೆ
ಪ್ರಭುವೆ ನೀನು ಮುತ್ತು ನಾನು ದಾರ, ಚಿನ್ನಕೆ ಕಂಪು ದೊರೆತಂತೆ
ಪ್ರಭುವೆ ನೀನು ಒಡೆಯ ನಾನು ಆಳು, ಮಾಡುತಿಹ ರವಿದಾಸನಿಂಥ ಭಕುತಿಯನೆ.
ಹುಟ್ಟು ಒಂದು ಆಕಸ್ಮಿಕ. ಯಾವುದೇ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಆ ಜಾತಿಯ ಬಲದಿಂದ ಆತ ಶ್ರೇಷ್ಠನಾಗಲಿ, ಭಕ್ತನಾಗಲಿ, ಸಂತನಾಗಲಿ ಆಗಲು ಸಾಧ್ಯವಿಲ್ಲ. ಮನುಷ್ಯನ ಆಚಾರ-ವಿಚಾರಗಳೂ ಆತನ ಮೇಲು ಕೀಳನ್ನು ನಿರ್ಧರಿಸುತ್ತವೆ, ಆತನನ್ನು ಪರಮ ಸಿದ್ಧಿಯತ್ತ ಕರೆದೊಯ್ಯುತ್ತವೆ ಎಂಬುದು ಈತನ ಸ್ಪಷ್ಟ ಅಭಿಪ್ರಾಯ. ಈತನ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣನಾಗಿರುವ ವ್ಯಕ್ತಿಯಲ್ಲಿ ಮನುಷ್ಯತ್ವವಿರದಿದ್ದರೆ ಆತನೂ ಶ್ವಪಚನೇ.

ಇವನ ಕೃತಿಗಳು ಬ್ರಜಭಾಷೆಯಲ್ಲಿವೆಯಾದರೂ ರಾಜಸ್ತಾನಿ ಖಡೀ ಬೋಲಿ, ಉರ್ದು, ಪಾರ್ಸಿ ಶಬ್ದಗಳ ಮಿಶ್ರಣವಿದೆ. ಸರಳ, ಸಹಜ, ನಿರಾಡಂಬರ ಶೈಲಿಯಲ್ಲಿ ಈತ ಬರೆದಿರುವ ಗೀತೆಗಳು ಅತ್ಯಂತ ಮಾರ್ಮಿಕ ಹಾಗೂ ಮನೋಜ್ಞ. ಪ್ರಹ್ಲಾದ ಲೀಲಾ ಎಂಬ ಗ್ರಂಥ ಇವನಿಂದ ರಚಿತವಾದದ್ದು ಎಂಬ ಅಭಿಪ್ರಾಯವಿದೆ.

ಮೇವಾಡದ ಝಾಲಿರಾಣಿ ಇವನ ಶಿಷ್ಯತ್ವ ಸ್ವೀಕರಿಸಿದ್ದಳೆಂದು ಪ್ರತೀತಿ. ಮೀರಾಬಾಯಿಯೂ ಇವನನ್ನು ಗುರು ರೂಪದಲ್ಲಿ ಸ್ವೀಕರಿಸಿದ್ದಳಂತೆ. ರೈದಾಸನ ಸಮಕಾಲೀನರಾದ ಕಬೀರದಾಸ, ನಾಭಾದಾಸ ಮೊದಲಾದವರು ಇವನನ್ನು ಅತ್ಯಂತ ಆದರದಿಂದ ನೆನೆದಿದ್ದಾರೆ. ಇವನ ಶ್ರೇಷ್ಠತೆಯನ್ನು ಸಾರುವ ಕೆಲವು ಕಥೆಗಳು (ಗಂಗೆಯ ಕಥೆ, ಭಗವಂತ ಸಾಧುವಿನ ವೇಷದಲ್ಲಿ ಬಂದದ್ದು, ರತ್ನಕಂಕಣದ ಕಥೆ, ಕಳ್ಳರ ಮನಃಪರಿವರ್ತನೆ) ಪ್ರಚಲಿತವಾಗಿವೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಈತನ ಅನುಯಾಯಿಗಳು ಹರಡಿಕೊಂಡಿದ್ದಾರೆ. ಪಂಜಾಬಿನ ಗುಡಗಾಂವ್ ಮತ್ತು ರೋಹತಕ್ ಜಿಲ್ಲೆಗಳಲ್ಲಿ ಈತನ ಅನುಯಾಯಿಗಳು ಬಹು ಸಂಖ್ಯೆಯಲ್ಲಿರುವರೆಂದೂ ಗುಜರಾತಿನಲ್ಲಿರುವವರು ತಮ್ಮನ್ನು ರವಿದಾಸೀ ಎಂಬುದಾಗಿ ಕರೆದುಕೊಳ್ಳುತ್ತಾರೆಂದೂ ಬ್ರಿಗ್ಸ್ ಎಂಬಾತ ಹೇಳಿದ್ದಾನೆ. ಕಾಥೇವಾಡ ಮುಂತಾದ ಕಡೆಗಳಲ್ಲಿ ರವಿದಾಸಕುಂಡಗಳೂ ತಿರುಪತಿಯ ವೈಕುಂಠಕೋಲ ಎಂಬಲ್ಲಿ ಈತನ ಗದ್ದುಗೆಯೂ ಇರುವುದಾಗಿ ತಿಳಿದುಬರುತ್ತವೆ.	

(ಟಿ.ಎಚ್.ಐ.;ಎಸ್.ಎನ್.ಜಿ.;ಎಸ್.ಎಚ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ